ಜಾರುಮಾಪಕ
ಒಂದು ವಸ್ತುವಿನ ಗಾತ್ರವನ್ನು ಒಂದು ಅಂಗುಲದ ಹತ್ತುಸಾವಿರ ಅಂಶದಷ್ಟರವರೆಗೆ ಕರಾರುವಾಕ್ಕಾಗಿ ಅಳೆಯಬಲ್ಲ ಉಪಕರಣ. ಯಂತ್ರಭಾಗಗಳನ್ನು ಉತ್ಪಾದಿಸುವ ಕರ್ಮಾಗಾರಗಳಲ್ಲಿ ಮಾಪಕೋಪಕರಣವಾಗಿ ಇದರ ವಿಶೇಷ ಬಳಕೆ ಉಂಟು. ಇದು ವಿಶಿಷ್ಟ ರೀತಿಯ ಉಕ್ಕಿನಿಂದ ತಯಾರಿಸಲ್ಪಟ್ಟ ಆಯಾಕಾರದ ಅಚ್ಚು (ಬ್ಲಾಕ್). ಅಚ್ಚಿನ ಪರಸ್ಪರಾಭಿಮುಖವಾದ ಎರಡು ಪಾಶ್ರ್ವಗಳನ್ನು ಮೊದಲು ಕಠಿಣಗೊಳಿಸಿ ತದನಂತರ ಬಹು ಸೂಕ್ಷ್ಮವಾಗಿ ಸಾಣೆ ಹಿಡಿದಿರುತ್ತಾರೆ.  ಆದ್ದರಿಂದ ಪಾಶ್ರ್ವಗಳು ಪರಿಪೂರ್ಣಸಮತಲಗಳಾಗಿಯೂ ಸಮಾಂತರವಾಗಿಯೂ ಇರುತ್ತವೆ. ಅಚ್ಚಿನ ಮೇಲೆ ನಮೂದಿಸಿರುವ ಅದರ ನಾಮಕ ಗಾತ್ರಕ್ಕೂ (ನಾಮಿನಲ್ ಸೈಜ್) ಪಾಶ್ರ್ವಗಳ ದೂರಕ್ಕೂ ಇರುವ ವ್ಯತ್ಯಾಸ ಅಂಗುಲದ ಕೆಲವು ದಶಲಕ್ಷ ಭಾಗಕ್ಕಿಂತ ಹೆಚ್ಚು ಇರುವುದಿಲ್ಲ. ವಿವಿಧನಾಮಕ ಗಾತ್ರಗಳ ಅಚ್ಚುಗಳನ್ನು ಅಪೇಕ್ಷಿತ ರೀತಿಯಲ್ಲಿ ಸೇರಿಸಿದರೆ ಒಂದು ಮಾಪಕ ಶ್ರೇಣಿ (ಸೆಟ್) ದೊರೆಯುತ್ತದೆ.  ಇಂಥ ಒಂದು ಶ್ರೇಣಿಯ ನಿರ್ದಿಷ್ಟ ಅಚ್ಚುಗಳನ್ನು ಕೂಡಿಸಿದಾಗ, ಒದಗುವ ಸಂಯೋಜನೆಯಿಂದ ವಸ್ತುವಿನ ಗಾತ್ರವನ್ನು ನಾಲ್ಕನೆಯ ದಶಮಾಂಶಸ್ಥಾನದವರೆಗೆ (ಹತ್ತುಸಾವಿರದ ಒಂದು ಭಾಗ) ನಿರ್ಧರಿಸಬಹುದು.  ಅಚ್ಚಿನ  ಸಾಣೆಹಿಡಿದ ಪಾಶ್ರ್ವಗಳು ಪರಿಪೂರ್ಣ ಸಮತಲಗಳಾಗಿರುವುದರಿಂದ, ಎರಡು ಅಚ್ಚುಗಳನ್ನು ಸೇರಿಸಿದರೆ ಅವು ಬಲವಾಗಿ ಅಂಟಿಕೊಳ್ಳುವುವು.  ಪುನಃ ಅವನ್ನು ಬೇರ್ಪಡಿಸಲು ಸಾಕಷ್ಟು ಬಲಪ್ರಯೋಗ ಮಾಡಬೇಕಾಗುತ್ತದೆ.

ಸ್ವೀಡನ್ನಿನ ಜೋಹಾನ್ಸನ್ ಎಂಬಾತ ಜಾರುಮಾಪಕಗಳನ್ನು ಮೊದಲು ತಯಾರಿಸಿದ.  ಆದ್ದರಿಂದ ಈ ಅಚ್ಚುಗಳಿಗೆ ಜೋಹಾನ್ಸನ್ ಗೇಜ್ ಬ್ಲಾಕ್ ಅಥವಾ ಜೋ ಬ್ಲಾಕ್ ಎಂದೇ ಹೆಸರಾಗಿದೆ.  ಇದರ ಏಕಸ್ವಾಮ್ಯವನ್ನು ಈಗ ಅಮೆರಿಕದ ಫೋರ್ಡ್ ಮೋಟಾರ್ ನಿಖರತೆಯ ನಾಲ್ಕು ದರ್ಜೆಗಳಲ್ಲಿ, ಜಾರುಮಾಪಕಗಳನ್ನು ತಯಾರಿಸುತ್ತಾರೆ: 1 ವರ್ಕ್‍ಷಾಪ್-ಂ ದರ್ಜೆ, 2 ವರ್ಕ್‍ಷಾಪ್- ಃದರ್ಜೆ, 3 ಪರೀಕ್ಷಕ ದರ್ಜೆ, 4. ಅಂಶಾಂಕನ (ಕ್ಯಾಲಿಬ್ರೇಷನ್) ದರ್ಜೆ, ಎಂಬತ್ತೊಂದು ಅಚ್ಚುಗಳಿರುವ ವರ್ಕ್‍ಷಾಪ್ ಂ,ಃ ದರ್ಜೆಗಳನ್ನು ಕರ್ಮಾಗಾರದ ಸಾಮಾನ್ಯ ಬಳಕೆಗೂ ಪರೀಕ್ಷಕ, ಅಂಶಾಂಕನ ದರ್ಜೆಗಳ ಅತ್ಯುತ್ತಮ ರೀತಿಯ ಅನ್ವೇಷಣೆಗೂ ಬಳಸುವರು.

ಹೋಕ್ ಗೇಜ್, ಫಾನ್ ಕಾಯ್‍ರನ್ ಗೇಜ್ ಮುಂತಾದ ಇದೇ ನಮೂನೆಯ ಇತರ ಜಾರುಮಾಪಕಗಳು ಕೆಲವು ದೇಶಗಳಲ್ಲಿ ಬಳಕೆಯಲ್ಲಿವೆ.
(ಬಿ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ